ಮೈಸೂರು ದಸರಾ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಇವತ್ತು ಹಿರಿಯ ಮಾಜಿ ಸಚಿವ ಕಿರಿಯ ಹಾಲಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸಮಯ ಪ್ರಜ್ಞೆಯ ಪಾಠ ಮಾಡಿದರು. ಇದಕ್ಕೆ ಹಬ್ಬದ ಆಚರಣೆಯ ಹೊರತು ಪಡಿಸಿ ಬೇರೆ ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಇವತ್ತು ಬೆಳಗ್ಗೆ ಅರಮನೆ ಮೈದಾನದಲ್ಲಿ ಆನೆಗಳ ಮಾವುತರು ಹಾಗೂ ಕಾವಾಡಿಗರ ಕುಟುಂಬದವರಿಗೆ ಉಪಹಾರ ಕೂಟ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ 9 ಗಂಟೆಗೆ ನಿಗದಿಯಾಗಿತ್ತು. ಆದರೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಕ್ತ ಸಮಯಕ್ಕೆ ಬಾರದೇ 10 ಗಂಟೆಯಾದರೂ ಯತೀಂದ್ರ ಆಗಮಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವ ತನ್ವೀರ್ ಸೇಠ್ ಸ್ಥಳದಲ್ಲೇ ತಮ್ಮ ಸಿಟ್ಟು- ಅಸಮಾಧಾನವನ್ನು ತೋರ್ಪಡಿಸಿದರು. ಇಲ್ಲಿ ಮಾವುತರು ಬೆಳಗ್ಗೆಯಿಂದಲೂ ಕಾಯುತ್ತಿದ್ದಾರೆ. ಅವರಿಗೆ ಗೌರವ ನೀಡಬೇಕು. ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು. ಅವರನ್ನು ಉಪಹಾರಕ್ಕಾಗಿ ಕಾಯಿಸುವುದು ಸರಿಯಲ್ಲ ಎಂದು ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿ ಕೂಡಲೇ ಅಧಿಕಾರಿಗಳಿಗೆ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಸಹ ಕಾರ್ಯಕ್ರಮವನ್ನು ಆರಂಭಿಸಲು ವಿಳಂಬ ಮಾಡಿದ್ದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡರು
ಸಮಯ ಪ್ರಜ್ಞೆ ಇಲ್ವೇನ್ರೀ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್ ಎಂದು ಅವರು ಜಿಲ್ಲಾಧಿಕಾರಿಯನ್ನು ಫೋನಿನಲ್ಲೇ ತರಾಟೆಗೆ ತೆಗೆದುಕೊಂಡರು. ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಆಗಬೇಕು ಎಂದು ಸೇಠ್ ಪ್ರತಿಪಾದಿಸಿದರು. ಬಳಿಕ ತನ್ವೀರ್ ಸೇಠ್ ಉಪಹಾರ ಕೂಟ ಸ್ಥಳದಿಂದ ತೆರಳಿದರು. ನಂತರ 10 ಗಂಟೆ 15 ನಿಮಿಷಕ್ಕೆ ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು. ಅಲ್ಲಿಯವರೆಗೂ ಮಾವುತರು ಹಾಗೂ ಕಾವಾಡಿಗರ ಕುಟುಂಬ ಬಾಳೆ ಎಲೆಯ ಮೇಲೆ ಸುಮ್ಮನೇ ಕೂರಬೇಕಾಗಿ ಬಂದಿತ್ತು. ಇವತ್ತು ನಡೆದ ಈ ಘಟನೆ ಅಸಮಾಧಾನದ ಸ್ಫೋಟವೋ ಇಲ್ಲ ತನ್ವೀರ್ ಸೇಠ್ ಯತೀಂದ್ರಗೆ ಮಾಡಿದ ಸಮಯ ಪ್ರಜ್ಞೆ ಪಾಠವೋ ಎನ್ನುವುದು ಚರ್ಚೆಯಾಗುತ್ತಿದೆ.


