ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿ ಮಾಡುವ ಯತ್ನ ನಡೆದಿದೆ. ದಾಳಿಗೆ ಯತ್ನಿಸಿದ ಮಹಿಳೆಯನ್ನು ಮಾದಕ ವ್ಯಸನಿ ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಮನೆ ಬಳಿ ಬಂದು ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾಳೆ. ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಮತಾ ಬ್ಯಾನನರ್ಜಿ ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ನಲ್ಲಿರುವ ‘ಮಿಲನ್ ಸಂಘ’ ದುರ್ಗಾ ಪೂಜೆ ಪಂಡಾಲ್ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಬ್ಯಾನರ್ಜಿ ಅವರ ಮೇಲೆಯೇ ದಾಳಿಗೆ ಯತ್ನ ನಡೆದಿದೆ. ದಾಳಿಗೆ ಯತ್ನಿಸಿದವಳನ್ನು ನಾಗರಿಕ ಸ್ವಯಂಸೇವಕಿ ತನ್ನಿಷ್ಠ ಸಹಾ ಎಂದು ಗುರುತಿಸವಾಗಿದೆ. ಮಾದಕ ವ್ಯಸನಿ ಆಗಿರುವ ಆಕೆ ತಾನು ಮಮತಾ ಬ್ಯಾನರ್ಜಿ ಸೊಸೆ ಎಂದು ಪರಿಚಯಿಸಿಕೊಂಡು ಕೃತ್ಯ ಎಸಗಲು ಮುಂದಾಗಿದ್ದಾಳೆ. ಅಲ್ಲದೇ ಮಮತಾರನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ.
ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ಚಾಕು ದಾಳಿಯ ಪ್ರಯತ್ನವನ್ನು ತೃಣಮೂಲ ಕಾಂಗ್ರೆಸ್ ಇದೊಂದು ರಾಜಕೀಯ ಪಿತೂರಿ ಎಂದು ಕರೆದಿದೆ. ಪಕ್ಷದ ಮಾಜಿ ಸಂಸದ ಸಾಕೇತ್ ಗೋಖಲೆ, ಇಂದು ಮಾದಕ ವ್ಯಸನಿಯೊಬ್ಬಳು ಮಮತಾ ಬ್ಯಾನರ್ಜಿ ಅವರ ಮನೆಗೆ ಬಂದು ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಬಂಗಾಳದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ Z+ ಭದ್ರತೆ ಹೊಂದಿರುವ ಮತ್ತು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ನಾಯಕಿಯೂ ಸುರಕ್ಷಿತವಾಗಿಲ್ಲ ಎಂದು ಅವರು ದೂರಿದ್ದಾರೆ. ಇದು ಬಿಜೆಪಿಯ ಉದ್ದೇಶಪೂರ್ವಕ ಪಿತೂರಿಯೇ, ದೀದಿ ದೆಹಲಿಯಲ್ಲಿ ಅವರನ್ನು ನಿರ್ಮೂಲನೆ ಮಾಡಲು ನಿರ್ಧರಿಸಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಆ ಯುವತಿ ಮಮತಾ ಬ್ಯಾನರ್ಜಿ ಅವರ ಸೀರೆಯನ್ನು ಎಳೆದು, ಕೈಮಾಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ, ಆಕೆಯ ಬಳಿ ಚಾಕು ಸಹ ಇತ್ತು ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಪಕ್ಷದ ಬೆಂಬಲಿಗರು ಮತ್ತು ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಘಟನೆಯು ಮಾಜಿ ಸಿಎಂ ಅವರ ಭದ್ರತೆಯಲ್ಲಿ ಸಂಭವಿಸಿದ ದೊಡ್ಡ ಲೋಪವನ್ನು ಎತ್ತಿ ತೋರಿಸಿದ್ದು, ಇದು ಮಮತಾ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.



