ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ನಟಿ ಪವಿತ್ರಾಗೌಡ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದೇ ಬ್ಯಾರಕ್ನಲ್ಲಿ ಸುಮಾರು 30 ಮಂದಿ ವಿಚಾರಣಾಧೀನ ಕೈದಿಗಳಿದ್ದು, ಇದರಿಂದಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾರಕ್ನಲ್ಲಿರುವ ವಿದೇಶಿ ಪ್ರಜೆಗಳಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತಿದೆ. ಮಧ್ಯರಾತ್ರಿವರೆಗೂ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಪವಿತ್ರಾಗೌಡ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅವರು, ನ್ಯಾಯಾಧೀಶರೇ ಖುದ್ದಾಗಿ ಜೈಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಹಲವು ಬಾರಿ ಬ್ಯಾರಕ್ ಬದಲಾವಣೆ ಮಾಡುವಂತೆ ಪವಿತ್ರಾಗೌಡ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಈ ವೇಳೆ ಜೈಲಿನ ನಿಯಮಾವಳಿಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪವಿತ್ರಾಗೌಡ ತಮ್ಮ ಹೊಸ ಅರ್ಜಿಯಲ್ಲಿ ತಿಳಿಸಿದ್ದಾರೆ.

ಪವಿತ್ರಾಗೌಡ ಅವರ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಧೀಶರು, ಈ ಕುರಿತು ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೀಗ ಜೈಲಿನಲ್ಲಿನ ಪರಿಸ್ಥಿತಿ ಮತ್ತು ಬ್ಯಾರಕ್ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ರೀತಿಯ ವರದಿ ಸಲ್ಲಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.