ಮುಂದಿನ ತಿಂಗಳು ಉತ್ತರಪ್ರದೇಶದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ರಂಗ ತಾಲೀಮು ನಡೆಸುತ್ತಿದೆ. ಅಖಾಡಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ ಹಾಗೂ ಕರ್ನಾಟಕದ ಉಸ್ತುವಾರಿ ಹರೀಶ್ ದ್ವಿವೇದಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ನಿಚ್ಚಳವಾಗಿದೆ. ಇವರ ಜೊತೆಗೆ ಮಾಜಿ ಸಂಸದ ವರುಣ್ ಗಾಂಧಿ ,ಸಂಜೀವ್ ಬಲ್ಯಾನ್ ಮತ್ತು ಸತ್ಯಪಾಲ್ ಸಿಂಗ್ ಅವರ ಹೆಸರುಗಳು ಓಡಾಡುತ್ತಿವೆ. 

ಉತ್ತರ ಪ್ರದೇಶದ ಒಟ್ಟು 10 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಚುನಾವಣೆ ನಡೆಯಲಿದೆ. 10ನೇ ಸ್ಥಾನಕ್ಕಾಗಿ ಸಮಾಜವಾದಿ ಪಾರ್ಟಿ ಹಾಗೂ ಆಡಳಿತಾರೂಢ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇದರಿಂದ ಸಮಾಜವಾದಿ ಪಕ್ಷ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಸದ್ಯ ಸಂಖ್ಯಾಬಲದಂತೆ ಸಮಾಜವಾದಿ ಪಕ್ಷ ಕೇವಲ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೂ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ. ಹೀಗಾಗಿ ಹಿರಿಯ ನಾಯಕ ರಾಮಗೋಪಾಲ್ ಯಾದವ್ ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸಲು ಪಕ್ಷ ನಿರ್ಧರಿಸಿದೆ. ಅವರೊಂದಿಗೆ ಮಾಜಿ ಐಎಎಸ್ ಅಧಿಕಾರಿ ಅಲೋಕ್ ರಂಜನ್ ಹಾಗೂ ಸಲೀಂ ಇಕ್ಬಾಲ್ ಹೆಸರುಗಳು ಮುಂಚೂಣಿಯಲ್ಲಿವೆ 

ಸಮಾಜವಾದಿ ಪಕ್ಷದ ಬಳಿ ಇರುವುದು 101 ಶಾಸಕರ ಬಲ. ಮತ್ತು ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದರೆ ಅಲ್ಲಿಗೆ ಒಟ್ಟು ಬಲ 103 ಆಗಲಿದೆ. 2 ಸ್ಥಾನಗಳನ್ನು ಗೆದ್ದ ಬಳಿಕ ಎಸ್ಪಿ ಬಳಿ ಕೇವಲ 29 ಹೆಚ್ಚುವರಿ ಮತಗಳು ಉಳಿಯಲಿವೆ. 3ನೇ ಸ್ಥಾನ ಗೆಲ್ಲಲು ಪಕ್ಷಕ್ಕೆ ಇನ್ನು 8 ಮತಗಳ ಅವಶ್ಯಕತೆ ಬೀಳುತ್ತೆ. ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಅನ್ವಯಿಸುವುದಿಲ್ಲ. ಇದಿಂದ ಪಕ್ಷದ ವಿರುದ್ಧ ಮತ ಚಲಾಯಿಸಿದರೂ ಶಾಸಕತ್ವ ರದ್ದಾಗುವುದಿಲ್ಲ. ಹೀಗಾಗಿ 10ನೇ ಸ್ಥಾನಕ್ಕಾಗಿ ಎರಡೂ ಪಕ್ಷಗಳಿಂದ ಭಾರಿ ಪ್ರಮಾಣದ ಕ್ರಾಸ್ ವೋಟಿಂಗ್ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದು ಕಡೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಏನಂದರೆ ಸ್ಮೃತಿ ಇರಾನಿ ಮತ್ತು ಹರೀಶ್ ದ್ವಿವೇದಿ ಇವರಿಬ್ಬರಿಗೂ ಬಿಜೆಪಿ ಉನ್ನತ ಹುದ್ದೆಗಳನ್ನು ನೀಡಿದೆ. ಇದರ ಬೆನ್ನಲ್ಲೇ ರಾಜ್ಯಸಭೆಗೂ ಕಳುಹಿಸುವ ತಂತ್ರ ರೂಪಿಸಿದೆ. ಅದೇ ರೀತಿ ವರುಣ್ ಗಾಂಧಿಗೆ ಪಕ್ಷ 2024ರಲ್ಲಿ ಟಿಕೆಟ್ ನಿರಾಕರಿಸಿತ್ತು. ಅಷ್ಟೇ ಅಲ್ಲ ಇಲ್ಲಿಯವರೆಗೂ ಮೂಲೆಗುಂಪು ಮಾಡಿತ್ತು. ಇದೀಗ ಇದೇ ವರುಣ್ ಗಾಂಧಿಗೆ ರಾಜ್ಯಸಭೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಈ ಮೂಲಕ ಗಾಂಧಿ ಕುಟುಂಬಕ್ಕೆ ಟಾಂಟ್ ಕೊಡಲು ಬಿಜೆಪಿ ಎದುರು ನೋಡುತ್ತಿದೆ ಎನ್ನಲಾಗಿದೆ.

ಬಿಜೆಪಿ ಇಲ್ಲಿ ಏಳು ಸ್ಥಾನಗಳಲ್ಲಿ ಗೆಲ್ಲಲು ಯಾವುದೇ ಅಳುಕಿಲ್ಲ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 8ನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸಲು ಬಿಡೆಪಿ ಲೆಕ್ಕಾಚಾರ ಹಾಕುತ್ತಿದೆ. ಕ್ರಾಸ್ ವೋಟಿಂಗ್ ಮೂಲಕ ಗೆಲುವು ಸಾಧಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇದೇ ಕಾರಣಕ್ಕಾಗಿ ಬಿಜೆಪಿ ಈ ಬಾರಿ ಜಾಟ್, ರಜಪೂತ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಚಿಂತಿಸಿದೆ.

ಇಲ್ಲಿ ಬಿಜೆಪಿ ವರುಣ್ ಗಾಂಧಿಯನ್ನು ಬಹುತೇಕ ಮರೆತೇ ಬಿಟ್ಟಿತ್ತು. ಆದರೆ ರಾಹುಲ್ ಗಾಂಧಿ ಯಾವಾಗ ಬಿಜೆಪಿಯನ್ನು ಕುಂತಲ್ಲಿ-ನಿಂತಲ್ಲಿ ಕಾಡಲು ಶುರು ಮಾಡಿದರೋ ಈಗ ಮೂಲೆಗುಂಪು ಮಾಡಿದ್ದ ಅದೇ ವರುಣ್ ಗಾಂಧಿಯನ್ನು ರಾಜ್ಯಸಭೆಗೆ ಕರೆತರಲು ನೋಡುತ್ತಿದೆ. ಈ ಮೂಲಕ ದಾಯಾದಿಗಳನ್ನು ಮತ್ತೊಮ್ಮೆ ಎದುರು-ಬದುರು ಮಾಡಲು ಬಿಜೆರಿ ತಂತ್ರ ರೂಪಿಸಿದೆ.