ಈ ಬಗ್ಗೆ ನಿಮ್ಮ ತಾಯ್ನಾಡು ನ್ಯೂಸ್ ಮೂರು ತಿಂಗಳ ಹಿಂದೆಯೇ ವರದಿ ಮಾಡಿತ್ತು. ರಾಜ್ಯ ಬಿಜೆಪಿ ಮನೆಯಲ್ಲಿ ನವೆಂಬರ್ ವೇಳೆಗೆ ಮಹತ್ತರ ಆಗುಹೋಗುಗಳು ಆಗಲಿವೆ. ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಬದಲಾಗುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ವಿವರಿಸಿತ್ತು. ಇದೀಗ ಅದು ದೆಹಲಿ ಅಂಗಳದಿಂದಲೇ ಕೇಳಿ ಬರುತ್ತಿದೆ.
ಕಳೆದ ಒಂದೂವರೆ ವರ್ಷದಿಂದಲೂ ರಾಜ್ಯ ಬಿಜೆಪಿ ಕಾರಿಡಾರ್ ಸ್ವಲ್ಪ ಬ್ಯಸಿಯಾಗಿದೆ. ವಿಜಯೇಂದ್ರ ಹಾಗೂ ಅಶೋಕ್ ಇಬ್ಬರೂ ಪಾದರಸದಂತೆ ಪಾದಯಾತ್ರೆ ಮಾಡಿದ್ದಾರೆ. ಆದರೆ ಅದರಿಂದ ಆಚೆಗೂ ಒಂದಷ್ಟು ಬೆಳವಣಿಗೆಗಳು ಆಗಿವೆ. ಮೊದಲು ರಾಜ್ಯ ಉಸ್ತುವಾರಿಯಾಗಿದ್ದ ರಾಧ ಮೋಹನ್ ದಾಸ್ ಇವರಿಬ್ಬರ ಬಗ್ಗೆ ದೆಹಲಿ ನಾಯಕರಿಗೆ ಒಂದೊಳ್ಳೇ ರಿಪೋರ್ಟ್ ಕೊಟ್ಟಿದ್ದರು ಎನ್ನುವ ಮಾತುಗಳಿವೆ. ರಾಜ್ಯಕ್ಕೆ ಬಂದು ಹೋದಾಗಲೆಲ್ಲಾ ನಾಯಕರ ಮುಂದೆ ವಿಜಯೇಂದ್ರ ಬಗ್ಗೆ ಒಳ್ಳೇ ಅಭಿಪ್ರಾಯವನ್ನೇ ಮಂಡಿಸಿದ್ದರು. ಆದರೆ ಈಗ ನೇಮಕವಾಗಿರುವ ಹರೀಶ್ ದ್ವಿವೇದಿ ಮನಸ್ಸಿನಲ್ಲಿ ಅದೇನಿದೇಯೋ ಏನೋ ಒಂದಷ್ಟು ಬದಲಾವಣೆಯ ಬಗ್ಗೆ ಚಿಂತನೆ ನಡೆಸಿದ್ದಾರಂತೆ. ಅದಕ್ಕೆ ತಕ್ಕಂತೆ ಪಕ್ಷದ ಹೈಕಮಾಂಡ್ ಉನ್ನತ ಮಟ್ಟದ ಎರಡು ಹುದ್ದೆಗಳಲ್ಲಿ ಬದಲಾವಣೆಗಳನ್ನು ಮಾಡವು ಮುಂದಾಗಿದೆಯಂತೆ. ಅದರಂತೆ ಮತ್ತೊಂದು ಕಡೆ ವಿಧಾನಸಭೆಯ ವಿರೋಧ ಪಕ್ಷದ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನವೆಂಬರ್ನಲ್ಲಿ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಬದಲಿಸುವ ಯೋಚನೆಯಲ್ಲಿ ದೆಹಲಿ ನಾಯಕರು ಇದ್ದಾರೆ ಎನ್ನುವ ಗುಸುಗುಸು ಇದೆ.
ವಿಜಯೇಂದ್ರ ಮೊದಲಿಗಿಂತ ಫುಲ್ ಆ್ಕಕ್ಟಿವ್ ಆಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಓರೆ ಕೋರೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿರುವಾಗ ಇಂಥ ಸಂದರ್ಭದಲ್ಲೇ ಅವರನ್ನು ಅಲುಗಾಡಿಸಿದರೆ ಹೇಗೆ ಎನ್ನುವುದು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಆದರೆ ಈ ತೀರ್ಮಾನ ಆಗಿ ನಾಲ್ಕೃದು ತಿಂಗಳೇ ಕಳೆದಿದೆ ಎನ್ನಲಾಗುತ್ತಿದೆ. ಅಲ್ಲದೇ ಮೂರು ವರ್ಷಗಳು ತುಂಬಿರುವುದರಿಂದ ಇದು ಅನಿವಾರ್ಯ ಎನ್ನುವ ಮಾತುಗಳೂ ಇವೆ. ಆದರೆ ಇನ್ನೊಂದು ಕಡೆ ವಿಜಯೇಂದ್ರ ನಾಯಕತ್ವ ತಾವಂದುಕೊಂಡಷ್ಟು ನಿರೀಕ್ಷಿತ ಫಲ ತಂದು ಕೊಟ್ಟಿಲ್ಲ ಎನ್ನುವ ಅಸಮಾಧಾನ ಹೈಕಮಾಂಡ್ ನಾಯಕರಲ್ಲಿ ಇದೆಯಂತೆ. ಸರ್ಕಾರವನ್ನು ಪರಿಣಾಮಕಾರಿಯಾಗಿ ಕಟ್ಟಿ ಹಾಕುತ್ತಿಲ್ಲ. ಇದರಿಂದ ಪರಿಷತ್ ಚುನಾವಣೆ ಬಳಿಕ ಒಂದು ತೀರ್ಮಾನಕ್ಕೆ ಬರಲು ಹೈಕಮಾಂಡ್ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಯಾರಿದ್ದಾರೆ ಬಿಜೆಪಿಯನ್ನು ಮುನ್ನಡೆಸಲು?
ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆ ನಿಜವೇ ಆದರೆ, ವಿಜಯೇಂದ್ರ ಸ್ಥಾನ ತುಂಬುವುದು ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ಆದರೆ ದೆಹಲಿ ಮೂಲಗಳ ಪ್ರಕಾರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇದರ ಜೊತಗೆ ಕೇಂದ್ರ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಹೆಸರು ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ ಶಾಸಕ ಮಹೇಶ್ ಟೆಂಗಿನಕಾಯಿ ಅವರನ್ನ ಈ ಸ್ಥಾನಕ್ಕೆ ನೇಮಿಸಿದರೆ ಹೇಗೆ ಎನ್ನುವ ಇರಾದೆ ಕೂಡಾ ಹೈಕಮಾಂಡ್ ನಾಯಕರಲ್ಲಿ ಇದೆಯಂತೆ. ಸದ್ಯ ನಿರಾಣಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಆದರೆ ಹಲವಾರು ವರ್ಷಗಳಿಂದಲೂ ಅಧ್ಯಕ್ಷ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಬಾರಿಯ ಅಧ್ಯಕ್ಷ ಗಾದಿಗೆ ನಡೆದ ಮ್ಯೂಸಿಕಲ್ ಚೇರ್ ಗೇಮ್ ನಲ್ಲಿ ಇವರೂ ಸುತ್ತಿದ್ದರು. ಆದರೆ ಹೈಮಾಂಡ್ ನಾಯಕರು ವಿಶಲ್ ಹೊಡೆದಾಗ ಕೂತಿದ್ದು ವಿಜಯೇಂದ್ರ. ಆಗ ನಿರಾಣಿ ಔಟಾಗಿದ್ದರು. ಇದೀಗ ಈ ಬಾರಿ ತಾವು ಈ ಸ್ಥಾನ ಅಲಂಕರಿಸಲೇ ಬೇಕು ಅಂತಿದ್ದಾರಂತೆ. ಇನ್ನು ಇವರಿಗಿರುವ ಮತ್ತೊಂದ ಪ್ಲಸ್ ಪಾಯಿಂಟ್ ಎಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯರ ಜೊತೆ ಒಂದಷ್ಟು ಒಳ್ಳೆಯ ಸಂಬಂಧ ಇಟ್ಟುಕೊಂಡಿರುವುದು. ಇದು ಇವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಬಹುದು ಎನ್ನುವ ಮಾತುಗಳು ಇವೆ. ಇನ್ನು ನಿರಾಣಿ ಹಿರಿಯ ನಾಯಕರು. ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಗುರುತಿಸಿಕೊಂಡಿರುವರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಇವರಿಗೆ ಒಳ್ಳೆಯ ಹೋಲ್ಡ್ ಇದೆ. ಇದು ಕೂಡ ಸಹಕಾರಿ ಆಗಬಹುದು
ವರ್ಚಸ್ಸು ವರ್ಸಸ್ ಜಾತಿ; ಯಾವುದು ಸರಿ?
ಬಿಜೆಪಿ ಸದ್ಯದ ಎಲ್ಲ ರೀತಿಯಲ್ಲಿ ಸವಾಲು ಎದುರಿಸುತ್ತಿದೆ. ಯಡಿಯೂರಪ್ಪನವರಂತಹ ಜನಪ್ರಿಯತೆ ಇರುವ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ವರ್ಚಸ್ಸಿನ ಕೊರತೆ ಢಾಳಾಗಿದೆ. ಇನ್ನೊಂದೆಡೆ ಜಾತಿ ಲೆಕ್ಕಾಚಾರದಲ್ಲಿ ನಾಯಕತ್ವನ್ನು ಆಯ್ಕೆ ಮಾಡಿಕೊಂಡರೂ ಒಳಜಗಳ ಮತ್ತು ಜಾತಿ ಸಮೀಕರಣದ ಸವಾಲುಗಳು ಎದುರಾಗಲಿವೆ.
ನಿರಾಣಿ, ಸೋಮಣ್ಣ ಅಥವಾ ಟೆಂಗಿನಕಾಯಿ ಅವರ ಆಯ್ಕೆ ಮೂಲಕ ಲಿಂಗಾತ ಸಮುದಾಯದ ವಿಶ್ವಾಸ ಉಳಿಸಿಕೊಳ್ಳಬಹುದು. ಆದರೆ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಆತಂಕವಿದೆ. ಈಗಾಗಲೇ ಕಾಂಗ್ರೆಸ್ ಕೆಪಿಸಿಸಿ ಸಾರಥ್ಯವನ್ನು ಹಿಂದುಳಿದ ವರ್ಗದ ಬಿ.ಕೆ. ಹರಿಪ್ರಸಾದ್ ಅವರಿಗೆ ವಹಿಸಿದೆ. ಈ ಮೂಲಕ ಹಿಂದುಳಿದ ವರ್ಗಗಳ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಅದಕ್ಕೆ ಟಾಂಟ್ ಕೊಡಬೇಕು ಎಂದರೆ ಬಿಜೆಪಿ ಕೂಡಾ ಹಿಂದುಳಿದ ವರ್ಗದ ನಾಯಕರನ್ನೇ ಆಯ್ಕೆ ಮಾಡುತ್ತದೆಯೇ? ಎಂಬ ಪ್ರಶ್ನೆಯೂ ಇದೆ. ಇದಕ್ಕೆ ಹುರಿಯಾಳುಗಳೂ ಸಿದ್ಧರಿದ್ದಾರೆ.
ಇನ್ನು ರಾಷ್ಟ್ರ ನಾಯಕರು ವಿರೋಧ ಪಕ್ಷದ ನಾಯಕತ್ವದಲ್ಲೂ ಬದಲಾವಣೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅಶೋಕ್ ಬದಲಿಗೆ ಹಿಂದಿಳಿದ ವರ್ಗದ ನಾಯಕರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ಮುಂದಾಗಿದೆಯಂತೆ. ಅದರಂತೆ ಅವರ ಕಣ್ಣು ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರತ್ತ ಬಿದ್ದಿದೆ ಎನ್ನುವ ಸುದ್ದಿಯೂ ಇದೆ. ಇಲ್ಲಿ ಬಿಜೆಪಿಯ ಮತ್ತೊಂದು ತಂತ್ರ ಎಂದರೆ ಸುನೀಲ್ ಕುಮಾರ್ ಬಿ.ಕೆ. ಹರಿಪ್ರಸಾದ್ ಅವರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಿಂದ ವೋಟ್ ಶೇರಿಂಗ್ ಗೆ ಅನುಕೂಲ ಆಗುತ್ತೆ ಎನ್ನುವ ಹಿನ್ನಲೆಯಲ್ಲಿ ಅವರ ಹೆಸರನ್ನು ಗಣನೆಗೆ ತಂದು ಕೊಂಡ್ರೂ ಅಚ್ಚರಿ ಇಲ್ಲ. ಇದರ ಜೊತೆ-ಜೊತೆಯಲ್ಲೇ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಹಾಗೂ ಒಕ್ಕಲಿಗ ಸಮುದಾಯದವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಈ ಮೂಲಕ ಅಶೋಕ್ ಅವರ ಸ್ಥಾನಕ್ಕೆ ಅವರದ್ದೇ ಸಮುದಾಯದ ಅಶ್ವತ್ಥ್ ನಾರಯಣರನ್ನು ತಂದು ಕೂರಿಸಿ ಆ ಸಮುದಾಯದ ಮತಗಳನ್ನು ಉಳಿಸಿ ಕೊಳ್ಳುವ ಪ್ರಯತ್ನವನ್ನೂ ಮಾಡಬಹುದು.
ಹೈಕಮಾಂಡ್ ಎಲ್ಲವನ್ನೂ ತಾನಂದು ಕೊಂಡಂತೆಯೇ ಮಾಡಿದರೂ ಇಲ್ಲೊಂದು ಅಸಮಾಧಾನದ ಹೊಗೆ ಎದ್ದು ಅವರ ಕಣ್ಣು ಉರಿಸುವುದು ಸತ್ಯ. ಅದೇನೆಂದರೆ ವಿಜಯೇಂದ್ರರ ಬದಲಾವಣೆ. ಇದರಿಂದ ಯಡಿಯೂರಪ್ಪ ಕುಟುಂಬಕ್ಕೆ ಗಾಯವಾಗಬಹುದು ಎನ್ನುವುದು. ಆದರೆ ಹೈಕಮಾಂಡ್ ಈಗಾಗಲೇ ಅದಕ್ಕೂ ಮದ್ದು ಅರೆದುಕೊಂಡಿದೆಯಂತೆ. ವಿಜಯೇಂದ್ರ ಬದಲಿಗೆ ಯಡಿಯೂರಪ್ಪನವರ ಮತ್ತೊಬ್ಬ ಮಗ ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಅವರನ್ನು ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳುವುದು. ಈ ಮೂಲಕ ಯಡಿಯೂರಪ್ಪನವರ ಕುಟುಂಬದಲ್ಲಿ ಏಳುವ ಬೆಂಕಿಯನ್ನು ಶಮನ ಮಾಡುವುದು.
ಇಷ್ಟೆಲ್ಲಾ ಲೆಕ್ಕಚಾರಗಳಲ್ಲಿ ಹೈಕಮಾಂಡ್ ಮುಳುಗಿದೆ. ರಾಜ್ಯ ಬಿಜೆಪಿ ಮನೆಗೆ ಹೊಸ ನಾಯಕನಿಂದ ಗೃಹ ಪ್ರವೇಶ ಮಾಡಿಸಿ ಮುಂದಿನ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿದೆ.