ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಆ ರಾಜ್ಯದಲ್ಲಿ ಫಲಿತಾಂಶ ಯಾರ ಪರ ಬರಬಹುದು ಎನ್ನುವುದು ಕುತೂಹಲ ಮೂಡಿಸಿದೆ. ಇದೇ ವೇಳೆ ಇಲ್ಲಿ ಯಾವ ರೀತಿಯ ಫಲಿತಾಂಶ ಬರಬಹುದು ಎನ್ನುವ ಬಗ್ಗೆ ಸಮೀಕ್ಷೆಯೊಂದು ಹೊರ ಬಿದ್ದಿದೆ.

ನ್ಯೂಸ್ ಲೀಡರ್ ಹಾಗೂ ಮ್ಯಾಟ್ರಿಜ್ ಜಂಟಿಯಾಗಿ ಈ ಬಗ್ಗೆ ಸರ್ವೆ ಮಾಡಿದ್ದು. ಇದರ ಪ್ರಕಾರ ಬಿಜೆಪಿ ಮೈತ್ರಿಕೂಟದ ಗೆಲುವಿನ ಓಟ ಈ ಬಾರಿಯೂ ಸಾಗಲಿದೆಯಂತೆ. ಆದರೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಮತ್ತು ಇಂಡಿಯಾ ಮೈತ್ರಿಕೂಟವೂ ಉತ್ತಮ ಸ್ಪರ್ಧೆಯನ್ನು ನೀಡಲಿದೆ ಎಂದು ಸರ್ವೆ ಹೇಳಿದೆ. ಮತ್ತೊಂದು ಕಡೆ ಮಾಯಾವತಿಯವರ ಬಹುಜನ ಸಮಾಜಪಾರ್ಟಿಗೆ ಈ ಬಾರಿಯೂ ನಿರಾಶೆಯಾಗಲಿದೆಯಂತೆ. ಇನ್ನೊಂದು ಅಚ್ಚರಿ ಎಂದರೆ ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಸದ್ದು ಜೋರಾಗಿಯೇ ಇದೆ. ಹೀಗಿದ್ದರೂ ಬಿಜೆಪಿ ಮೈತ್ರಿಕೂಬಟಕ್ಕೆ ಅನುಕೂಲಕರವಾಗಲಿದೆ ಎಂದು ಸಮೀಕ್ಷೆ ಹೇಳಿದೆ. 

403ವಿಧಾನಸಭಾ ಸ್ಥಾನವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ, ಸರಳ ಬಹುಮತಕ್ಕೆ 202 ಸ್ಥಾನವನ್ನು ಗೆಲ್ಲಲೇ ಬೇಕು. ಕಳೆದ ಬಾರಿ ಬಿಜೆಪಿ ಮೈತ್ರಿ ಕೂಟ 273 ಸೀಟು ಗೆದ್ದು ಗೆಲುವಿನ ಕೇಕೆ ಹಾಕಿತ್ತು. ಸಮಾಜವಾದಿ ಪಕ್ಷ 111 ಸ್ಥಾನವನ್ನು ಗೆದ್ದು ತೃಪ್ತಿ ಪಟ್ಟುಕೊಂಡಿತ್ತು. ಈಗಿನ ಮ್ಯಾಟ್ರಿಜ್ ಸಮೀಕ್ಷೆಯಂತೆ ಬಿಜೆಪಿಯ ಒಟ್ಟು ಗೆಲ್ಲುವ ಸ್ಥಾನ ಕಮ್ಮಿಯಾಗಲಿದೆ. ಇನ್ನೊಂದು ಕಡೆ, ಬಿಜೆಪಿ ಕಳೆದುಕೊಳ್ಳಬಹುದಾದ ಸ್ಥಾನವನ್ನು ಸಮಾಜವಾದಿ ಪಾರ್ಟಿ ಗೆಲ್ಲುವ ಸಾಧ್ಯತೆಯಿದೆ ಎನ್ನುತ್ತಿದೆ ಸಮೀಕ್ಷೆ. ಈಗಿನ ಟ್ರೆಂಡ್ ಪ್ರಕಾರ ಅಖಿಲೇಶ್ ಯಾದವ್ ಪಕ್ಷ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆಯಂತೆ.

ಬಿಜೆಪಿ ಮೈತ್ರಿ ಕೂಟ ಪಡೆಯುವ ಸೀಟುಗಳ ಸಂಖ್ಯೆ ಕಡಿಮೆ ಆಗಬಹುದು. ಆದರೆ ಅಧಿಕಾರ ಹಿಡಿಯಲು ಸಮಸ್ಯೆ ಇಲ್ಲ. ಒಂದು ವೇಳೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಹಾಗೇ ಬಹುಜನ ಸಮಾಜವಾದಿಯೂ ಸೇರಿಕೊಂಡರೆ ಪರಿಸ್ಥಿತಿ ಬೇರೆಯೇ ಆಗಬಹುದು. ಇದೆಲ್ಲವೂ ಒಂದು ಕಡೆಯಾದ್ರೆ ಮತ್ತೊಂದು ಕಡೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಇವೆ. ಈ ಅಂತರದಲ್ಲಿ ಏನು ಬೇಕಾದರೂ ಆಗಬಹುದು.