ರಾಜ್ಯ ಬಿಜೆಪಿ ಘಟಕ ದಿನದಿಂದ ದಿನಕ್ಕೆ ಆ್ಯಕ್ಟೀವ್ ಆಗುತ್ತಿದೆ. ಈಗಷ್ಟೇ ಒಂದಲ್ಲ..ಎರಡಲ್ಲ ಮೂರು ಪಾದಯಾತ್ರೆಗಳನ್ನು ಮುಗಿಸಿದೆ. ಇದನ್ನು ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಹಂಗಿಸಿತ್ತು. ಆದರೆ ಇದೀಗ ಈಗ ಬೂತ್ ವಿಜಯ ಸಂಕಲ್ಪ ಯಾತ್ರೆ ಮಾಡಿ ಟಾಂಟ್ ಕೊಡಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತೊಮ್ಮೆ ತಮ್ಮ ತಾಕತ್ತು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಹುದ್ದೆಯಲ್ಲಿ 25 ವರ್ಷ ಪೂರೈಸಿದ್ದಾರೆ.ಇದರ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದ ಬೂತ್ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗುವುದು. ಈ ವಿಚಾರವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಜನಸೇವಾ ಕಾರ್ಯಕ್ರಮಗಳು ಪ್ರಧಾನಿಯಾದ ನಂತರವೂ ಮುಂದುವರಿದಿವೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಒಂದು ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದನ್ನು ರಾಜ್ಯದಲ್ಲಿಯೂ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು. 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಪ್ರೀತಂ ಗೌಡ ವಿವರಿಸಿದ್ದಾರೆ.

ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪ್ರವಾಸ 
ಇನ್ನು ಈ ಪ್ರವಾಸದ ವೇಳೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬವ ಕೆಲಸ ಮಾಡಲಾಗುವುದು. ಎಲ್ಲಾ ಚುನಾವಣಾ ಸವಾಲುಗಳಿಗೆ ತಯಾರು ಮಾಡುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುವುದು. ಬೂತ್ ಮಟ್ಟದ ವಿಚಾರಗಳನ್ನು ಇಟ್ಟುಕೊಂಡು ಈ ಬೂತ್ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುವುದು. ಹತ್ತನೇ ತಾರೀಕಿನವರೆಗೆ ಹದಿನಾರು ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ಮುಂದಿನ ಮೂರು ತಿಂಗಳ ಒಳಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಗುವುದು. ಬಿಎಲ್ ಎ ಹಾಗೂ ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಇತರ ಚುನಾವಣಾ ಪ್ರತಿನಿಧಿಗಳ ಸಲಹೆ ಪಡೆಯಲಾಗುವುದು .

ಬಿಜೆಪಿ ನಾಯಕರ ಪ್ರಕಾರ ಬಳ್ಳಾರಿ ಚಲೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಇದರಿಂದಾಗಿ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಅಧಿವೇಶನ ನಡೆಸಿತು. ರಾಜ್ಯದಲ್ಲಿನ ಭಂಡ ಸರ್ಕಾರ ಯಾವ ರೀತಿಯ ಆಡಳಿತ ನೀಡುತ್ತಾ ಇದೆ ಎನ್ನುವುದು ಬಿಜೆಪಿ ನಾಯಕರ ಅಭಿಮತ. ಇದರಿಂದ ಉತ್ತೇಜಿತವಾಗಿರುವ ಬಿಜೆಪಿ ಅದೇ ಹುರುಪಿನಲ್ಲಿ ಈ ಯಾತ್ರೆಯನ್ನೂ ನಡೆಸಲು ಪಣ ತೊಟ್ಟಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು ಎಂಬುದು ಪಕ್ಷದ ಉದ್ದೇಶವಾಗಿದೆಯಂತೆ.

ಪ್ರತಿ ದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಪಾದಯಾತ್ರೆಯನ್ನೂ ನಡೆಸಲಾಗುವುದು. ಚುನಾವಣಾ ತಂಡದ ಜೊತೆಗೆ ಸಮಾಲೋಚನೆ ಮಾಡಲಾಗುವುದು. ರಾಜ್ಯ ಬಿಜೆಪಿ ತಣ್ಣಗಿದೆ ಆಡಳಿತ ಪಕ್ಷ ಕಾಂಗ್ರೆಸ್ ನ್ನು ಮಣಿಸುವಲ್ಲಿ ಆಡಳಿತಾತ್ಮಕ ವಿಚಾರಗಳಲ್ಲಿ ಅವರನ್ನು ಜಗ್ಗಿಸಿ ಕೇಳುವುದರಲ್ಲಿ ಬಿಜೆಪಿ ನಾಯಕರು ಸೋತಿದ್ದಾರೆ ಅಂತಾನೇ ಹೇಳಲಾಗುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗುತ್ತಿದೆ. ಕಮಲ ಪಾಳೆಯದಲ್ಲಿದ್ದ ಅಷ್ಟಿಷ್ಟು ಒಳ ಕಲಹಗಳು ತಿಳಿಯಾಗಿದೆ ಪಕ್ಷ ಸಂಘಟನೆಯತ್ತ ನಾಯಕರು ಹೆಜ್ಜೆ ಹಾಕುತ್ತಿದ್ದಾರೆ.