ಬಿಡದಿ ಟೌನ್ ಶಿಪ್ ವಿರೋಧಿಸಿ ಭೈರಮಂಗಲ ರೈತರು ಮಾಡುತ್ತಿರುವ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ತೀವ್ರವಾಗುತ್ತಿದೆ.ಯಾವುದೇ ಕಾರಣಕ್ಕೂ ನಾವು ಭೂಮಿ ಬಿಡಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರೈತರ ಪರ ಮಾತಾಡಿದ್ದು ನಿಮಗಾಗಿ ನಾನು ಜೈಲಿಗೆ ಹೋಗಲು ಸಿದ್ಧ ಅಂತ ಪುನರುಚ್ಚರಿಸಿದ್ದಾರೆ.
ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ತೀವ್ರಗೊಳ್ಳುತ್ತಾ ಇದ್ದಂತೆ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸಿದರು. ರೈತರನ್ನು ಸಮನಾಧಾನಪಡಿಸಿ ನಾವೆಲ್ಲರೂ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು. ಈ ವೇಳೆ ರೈತರು ದೇವೇಗೌಡರು ಬರಲೇ ಬೇಕು ಅಂತ ಪಟ್ಟು ಹಿಡಿದು ಘೋಷಣೆ ಕೂಗತೊಡಗಿದರು. ಇದರಿಂದ ನಿಖಿಲ್ ಕುಮಾರ ಸ್ವಾಮಿ ಸ್ಥಳದಲ್ಲೇ ದೇವೇಗೌಡರಿಗೆ ವೀಡಿಯೋ ಕಾಲ್ ಮಾಡಿ ರೈತರೊಂದಿಗೆ ಮಾತನಾಡಿಸಿದರು.
ವಿಡಿಯೋ ಕಾಲ್ ಮೂಲಕ ರೈತರ ಜೊತೆ ಸಮಾಲೋಚನೆ ನಡೆಸಿದ ದೇವೇಗೌಡರು ನನಗೆ ತೀವ್ರವಾದ ಹಲ್ಲು ನೋವು ಇದೆ. ವೈದ್ಯರ ಸಲಹೆಯಂತೆ ನಾವು ಹೊರಗೆ ಬರುವಂತಿಲ್ಲ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಬರಲಾಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು. ಆದರೆ ರೈತರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳುವುದು ಬೇಡ. ನಿಮ್ಮ ಹೋರಾಟ ಮುಂದುವರೆಸಿ ಎಂದು ಹೇಳಿದರು. ಅಲ್ಲದೇ ನಮ್ಮ ಕುಟುಂಬ ಹಿಂದಿನಿಂದಲೂ ರೈತರ ಪರವಾಗಿಯೇ ಹೋರಾಟ ಮಾಡುತ್ತಾ ಬಂದಿದೆ ನಾನು ಎಂದಿಗೂ ನಿಮ್ಮನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅಗತ್ಯ ಬಿದ್ದರೆ ನಿಮ್ಮ ಪರವಾಗಿ ವಿಧಾನಸೌಧದ ಮುಂದೆ ದರಣಿ ಕುಳಿತುಕೊಳ್ಳಲು ನಾನು ತಯಾರಿದ್ದೇನೆ.. ಜೈಲಿಗೆ ಹೋಗಲು ಕೂಡಾ ಸಿದ್ಧನಾಗಿದ್ದೇನೆ ಎಂದು ಧೈರ್ಯ ತುಂಬಿದರು.



