ಒಂದು ವರ್ಷದ ಹಿಂದಿನ ಡಿನ್ನರ್ ಫೋಟೋ ಈಗೇಕೆ ವೈರಲ್? ಇಂಡಿಯನ್‌ ಎಕ್ಸ್‌ಪ್ರೆಸ್‌ನ ಇಸಿಐ ತನಿಖೆ, ಆರ್ ಎಸ್ ಎಸ್ - ಬಿಜೆಪಿ ನಡುವೆ ಬದಲಾಗಿರುವ ಅಧಿಕಾರ ಸಮೀಕರಣದ ನಡುವೆ ಎದ್ದಿರುವ ಹೊಸ ಪ್ರಶ್ನೆಗಳಿಗೂ ಈ ಫೋಟೋಕ್ಕೂ ನಂಟಿದೆಯೇ?

ಒಂದು ಫೋಟೋ. ನಾಲ್ಕು ಮಂದಿ. ಒಂದು ಡಿನ್ನರ್.

ಫೋಟೋದಲ್ಲಿ ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್, ದಿ ಇಂಡಿಯನ್ ಎಕ್ಸ್‌ಪ್ರೆಸ್‌ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಂತ್ ಗೊಯೆಂಕಾ ಮತ್ತಿತರರು ಕಾಣಿಸುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಈ ಚಿತ್ರ ಮತ್ತೆ ವೈರಲ್ ಆಗುತ್ತಿದೆ.

ಚಿತ್ರದ ಜೊತೆಗೆ ಹರಿದಾಡುತ್ತಿರುವ ಪ್ರಶ್ನೆ ಇದು:
ಮೋಹನ್ ಭಾಗವತ್ ಮತ್ತು ಅನಂತ್ ಗೊಯೆಂಕಾ ನಡುವಿನ ಈ ಸಂಪರ್ಕಕ್ಕೂ, ಇಂಡಿಯನ್‌ ಎಕ್ಸ್‌ಪ್ರೆಸ್‌ ಇತ್ತೀಚೆಗೆ ಪ್ರಕಟಿಸಿದ ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯದ ಕುರಿತ ತನಿಖಾ ವರದಿಗೂ ಏನಾದರೂ ಸಂಬಂಧವಿದೆಯೇ? ಅಥವಾ ಇದು ಕೇವಲ ಒಂದು ಹಳೆಯ ಡಿನ್ನರ್ ಫೋಟೋವೇ? ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಿಂದ ಈ ಎರಡನ್ನೂ ಜೋಡಿಸುವ ನೇರ ಸಾಕ್ಷ್ಯ ಸದ್ಯಕ್ಕೆ ಇಲ್ಲ. ಆದರೆ ಈ ಫೋಟೋ ಒಂದು ರಾಜಕೀಯ  ಸುಳಿವಾಗಿ ಆಗಿ ಕುತೂಹಲ ಹುಟ್ಟಿಸಿರುವುದು ಮಾತ್ರ ನಿಜ.
ಏಕೆಂದರೆ ಫೋಟೋ ಮತ್ತೆ ಮುನ್ನೆಲೆಗೆ ಬಂದಿರುವ ಸಮಯ ಸಾಮಾನ್ಯವಾದುದಲ್ಲ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್ 23ರಂದು ಪ್ರಕಟಿಸಿದ ತನಿಖೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಚುನಾವಣಾ ಆಯೋಗದಲ್ಲಿ ಇತರ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಕೆಲವು ನಿರ್ಧಾರಗಳ ಬಗ್ಗೆ ಲಿಖಿತ ಆಕ್ಷೇಪ ದಾಖಲಿಸಿದ್ದರು ಎಂದು ವರದಿ ಮಾಡಿದೆ.

ಅಂದರೆ ಮೋದಿ-ಶಾ ಅವರ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್‌ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಉಳಿದಿಬ್ಬರು ಆಯುಕ್ತರು ತಕರಾರು ತೆಗೆದಿದ್ದರು. ಹತ್ತು ತಿಂಗಳ ಅವಧಿಯಲ್ಲಿ ಪದೇಪದೇ ಈ ದೂರುಗಳು ವ್ಯಕ್ತವಾಗಿದ್ದರು, ಜ್ಞಾನೇಶ್‌ ಕುಮಾರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯಿ ನೀಡಿರಲಿಲ್ಲ, ಭಿನ್ನಮತಕ್ಕೆ ಸ್ಪಂದಿಸಿರಲಿಲ್ಲ. ಮೋದಿ ಸರ್ಕಾರಕ್ಕೆ ಮುಜುಗರ ತರುವಂತಹ ವಿವಾದ ವರದಿಯಾದ  ಬೆನ್ನಲ್ಲೇ ಗೊಯೆಂಕಾ–ಭಾಗವತ್ ಭೇಟಿಯ ಫೋಟೋ ವೈರಲ್ ಆಗಿದೆ. 

ಇದು ಕಾಕತಾಳೀಯವೇ? ಅಥವಾ ಇದರ ಹಿಂದೆ ಇನ್ನೇನಾದರೂ ರಾಜಕೀಯ ಕಥೆಯಿದೆಯೇ? ಫೋಟೋ ಏನು ಹೇಳುತ್ತದೆ? ಏನು ಹೇಳುವುದಿಲ್ಲ? ಮೊದಲನೆಯದಾಗಿ ಒಂದು ಸಂಗತಿ ಸ್ಪಷ್ಟವಾಗಬೇಕು. 

ಈ ಫೋಟೋ ಆರ್‍‌ಎಸ್‌ಎಸ್‌ನ ಮುಖ್ಯಸ್ಥರಾದ ಮೋಹನ್ ಭಾಗವತ್ ಅಥವಾ ಅನಂತ್ ಗೊಯೆಂಕಾ ಅವರು ಇಸಿಐ ತನಿಖೆಯ ಹಿಂದೆ ಇದ್ದಾರೆ ಎಂಬುದಕ್ಕೆ ಸಾಕ್ಷ್ಯವಲ್ಲ. ಅಂತಹ ತೀರ್ಮಾನಕ್ಕೆ ಯಾವುದೇ ಸಾರ್ವಜನಿಕ ಪುರಾವೆ ಇಲ್ಲ. ಆದರೆ ಫೋಟೋ ಒಂದು ವಿಷಯವನ್ನು ನೆನಪಿಸುತ್ತದೆ:
RSS ಮತ್ತು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ನಡುವೆ ಸಂವಾದದ ಬಾಗಿಲು ಮುಚ್ಚಿಲ್ಲ. 2025ರಲ್ಲಿ RSS ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವಲಯಗಳೊಂದಿಗೆ ದೊಡ್ಡ ಪ್ರಮಾಣದ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ರಾಜಕೀಯ ನಾಯಕರು, ಮಾಧ್ಯಮ, ಕಲೆ, ಕ್ರೀಡೆ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಈ outreachಗೆ ಆಹ್ವಾನಿಸಲಾಗಿತ್ತು.
ಹೀಗಾಗಿ ಭಾಗವತ್ ಮತ್ತು ಮಾಧ್ಯಮ ಸಂಸ್ಥೆಯ ಪ್ರಮುಖ ವ್ಯಕ್ತಿಯೊಬ್ಬರು ಒಂದೇ ವೇದಿಕೆಯಲ್ಲಿ ಅಥವಾ ಖಾಸಗಿ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದನ್ನು ಮಾತ್ರ ಆಧರಿಸಿ ಯಾವುದೇ ಗುಪ್ತ ರಾಜಕೀಯ ಕಾರ್ಯಾಚರಣೆಯ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.

ಕಥೆಯ ಕೇಂದ್ರ ಫೋಟೋ ಅಲ್ಲ; ಬದಲಾಗಿರುವ ಅಧಿಕಾರದ ಸಮೀಕರಣ

ಆರ್‍‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಸಂಬಂಧ ಭಾರತೀಯ ರಾಜಕೀಯದಲ್ಲಿ ವಿಶಿಷ್ಟವಾದದ್ದು. ಬಿಜೆಪಿ ಒಂದು ರಾಜಕೀಯ ಪಕ್ಷ. ಆರ್‍‌ ಎಸ್ ಎಸ್ ಒಂದು ಸಾಮಾಜಿಕ–ಸೈದ್ಧಾಂತಿಕ ಸಂಘಟನೆ. ಆದರೆ ದಶಕಗಳಿಂದ ಎರಡರ ನಡುವೆ ಇರುವ ಸಂಘಟನಾ ಮತ್ತು ಸೈದ್ಧಾಂತಿಕ ಸಂಬಂಧ ಬಿಜೆಪಿಯ ರಾಜಕೀಯ ಚಲನವಲನವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖವಾಗಿದೆ.

ಮೋದಿ ಯುಗದಲ್ಲಿ ಈ ಸಂಬಂಧದ ಅಧಿಕಾರ ಸಮೀಕರಣ ಬದಲಾಗಿದೆ ಎಂಬ ಚರ್ಚೆ ಮತ್ತೆಮತ್ತೆ ಕೇಳಿ ಬಂದಿದೆ.  2025ರ ಸೆಪ್ಟೆಂಬರ್‌ನಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಕೂಡ ಮೋದಿ– ಆರ್ ಎಸ್ ಎಸ್ ಸಂಬಂಧವನ್ನು ವಿಶ್ಲೇಷಿಸುವಾಗ “changed power equations between BJP and RSS” ಎಂಬ ಹಿನ್ನೆಲೆಯನ್ನು ದಾಖಲಿಸಿತ್ತು. 2024ರ ಚುನಾವಣೆಗೆ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಈಗ ತನ್ನ ವ್ಯವಹಾರಗಳನ್ನು ತಾನೇ ನಿರ್ವಹಿಸಬಲ್ಲ ಪಕ್ಷವಾಗಿದೆ ಎಂಬ ಅರ್ಥದ ಹೇಳಿಕೆ ನೀಡಿದ್ದು ಆರ್ ಎಸ್ ಎಸ್‌ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ವರದಿ ಹೇಳಿತ್ತು.

ಇದು ಒಂದು ಪ್ರಮುಖ ಬದಲಾವಣೆಯ ಸೂಚನೆ. ಹಳೆಯ ಬಿಜೆಪಿಯಲ್ಲಿ; “ಸಂಘ ಏನು ಹೇಳುತ್ತದೆ?” ಎಂಬ ಪ್ರಶ್ನೆ ಯಾವಾಗಲು ಕೇಳಿಕೊಳ್ಳಲಾಗುತ್ತಿತ್ತು.  ಮೋದಿ ಯುಗದದಲ್ಲಿ ಈ ಪ್ರಶ್ನೆ ಕೇಳುವ ಸಂದರ್ಭ ಬಂದಿಲ್ಲ ಎಂಬುದು ಅನೇಕ ರಾಜಕೀಯ ವಿಶ್ಲೇಷಕರ ಮಾತು. ಹಾಗಾಗಿ ಆರ್‍‌ಎಸ್‌ಎಸ್‌ ಒಂದು ಕಾಲದ ‘ಮಾರ್ಗದರ್ಶಕ’, ಈಗ ಕೇವಲ ‘ಸೈದ್ಧಾಂತಿಕ ಕುಟುಂಬ’ವಷ್ಟೇ ಉಳಿದಿದೆ ಎಂದು ಹಲವು ಸಂದರ್ಭದಲ್ಲಿ ವಿಶ್ಲೇಷಿಸಲಾಗಿದೆ.

ಇದು ಬಹುಶಃ ಆರ್‍‌ಎಸ್‌ಎಸ್‌-ಬಿಜೆಪಿ ಸಂಬಂಧದ ದೊಡ್ಡ ರಾಜಕೀಯ ಪ್ರಶ್ನೆ ಎಂದೇ ಹೇಳಬಹುದು. ವಾಜಪೇಯಿ ಕಾಲದಲ್ಲಿ ಆರ್‍‌ಎಸ್‌ಎಸ್‌ ಜೊತೆಗಿನ ಸಂಬಂಧ ಒಂದು ರೀತಿಯದ್ದಾಗಿತ್ತು. ಮೋದಿ–ಶಾ ಕಾಲದಲ್ಲಿಚುನಾವಣಾ ಯಂತ್ರ, ನಾಯಕತ್ವ ಮತ್ತು ಸರ್ಕಾರದ ನಿರ್ಧಾರ ಪ್ರಕ್ರಿಯೆ ಹೆಚ್ಚು ಬಿಜೆಪಿ ಕೇಂದ್ರೀಕೃತವಾಗಿದೆ ಎಂಬುದು ರಾಜಕೀಯ ವಿಶ್ಲೇಷಣೆಯ ಪ್ರಮುಖ ವಿಷಯ. ಅಂದರೆ ಮೋದಿ- ಶಾ ಜೋಡಿ ಆರ್ ಎಸ್‌ ಎಸ್‌ ಮಾರ್ಗದರ್ಶನಕ್ಕೆ ಎಡತಾಕುವುದನ್ನು ನಿಲ್ಲಿಸಿದರು ಎಂಬುದು ವಿಶ್ಲೇಷಣೆಯ ತಾತ್ಪರ್ಯ.

ಹಾಗೆಂದ ಮಾತ್ರಕ್ಕೆ ಆರ್‍‌ ಎಸ್‌ ಎಸ್ ಸಂಪೂರ್ಣವಾಗಿ ಅಪ್ರಸ್ತುತವಾಗಿದೆ ಅಥವಾ ಮೋದಿ ಅದನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಹೇಳಸಾಧ್ಯವಿಲ್ಲ. ಬದಲಿಗೆ 2025ರ ಆಗಸ್ಟ್‌ನಲ್ಲಿ ಭಾಗವತ್ ಸ್ವತಃ ಆರ್ ಎಸ್‌ ಎಸ್ ತನ್ನ ಅಂಗಸಂಸ್ಥೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವುದಿಲ್ಲ ಎಂದು ಹೇಳಿದ್ದಾರೆ. ಅವುಗಳಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದೂ ತಿಳಿಸಿದ್ದಾರೆ.

ಹೀಗಾಗಿ ಆರ್‍‌ಎಸ್‌ಎಸ್‌-ಬಿಎಜಪಿ ಸಂಬಂಧವನ್ನು “ಮಾಲೀಕ–ಅಧೀನ ಸಂಸ್ಥೆ” ಎಂಬ ಸರಳ ಮಾದರಿಯಲ್ಲಿ ನೋಡುವುದಕ್ಕಿಂತ, ಸೈದ್ಧಾಂತಿಕ ಪ್ರಭಾವ, ಸಂಘಟನಾ ಸಂಬಂಧ ಮತ್ತು ನೇರ ರಾಜಕೀಯ ಅಧಿಕಾರ—ಈ ಮೂರರ ನಡುವಿನ ಅಂತರವಾಗಿ ನೋಡಲೂಬಹುದು. 

ಉತ್ತರವಿಲ್ಲದ  75 ವರ್ಷದ ಪ್ರಶ್ನೆ!

2025ರಲ್ಲಿ ಮೋದಿ 75 ವರ್ಷಕ್ಕೆ ಕಾಲಿಟ್ಟಾಗ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂತು.  ಕಾರಣ, ಬಿಜೆಪಿಯೊಳಗೆ 75 ವರ್ಷವನ್ನು ಒಂದು ರೀತಿಯ ಅನೌಪಚಾರಿಕ ನಿವೃತ್ತಿ ಮಿತಿಯಾಗಿ ಬಳಸಿದ ರಾಜಕೀಯ ಇತಿಹಾಸವಿದೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಹಿರಿಯ ನಾಯಕರನ್ನು ಸಕ್ರಿಯ ರಾಜಕೀಯ ನಾಯಕತ್ವದಿಂದ ಹಿಂದೆ ಸರಿಸಿ ಮಾರ್ಗದರ್ಶಕ ಮಂಡಳಿಗೆ ಕಳುಹಿಸಿದ ಸಂದರ್ಭ ಈ ಚರ್ಚೆಯ ಹಿನ್ನೆಲೆಯಲ್ಲಿದೆ.

2025ರ ಜುಲೈನಲ್ಲಿ ಭಾಗವತ್ ಅವರು ಆರ್ ಎಸ್‌ ಎಸ್‌ನ ಹಿರಿಯ ನಾಯಕ ಮೋರೋಪಂತ್ ಪಿಂಗಳೆ ಅವರ 75ನೇ ವಯಸ್ಸಿನ ನಂತರದ ನಿವೃತ್ತಿಯ ಪ್ರಸಂಗವೊಂದನ್ನು ಉಲ್ಲೇಖಿಸಿದ್ದರು. ಅದು ಮೋದಿಗೆ ಪರೋಕ್ಷ ಸಂದೇಶವೇ ಎಂಬ ವ್ಯಾಖ್ಯಾನಗಳು ಬಂದಿದ್ದವು. ಇಂಡಿಯನ್‌ ಎಕ್ಸ್‌ಪ್ರೆಸ್‌ ಕೂಡ ಆ ಸಂದರ್ಭದಲ್ಲಿ ಈ ಊಹಾಪೋಹವನ್ನು ದಾಖಲಿಸಿತ್ತು. ಆದರೆ ನಂತರ ಭಾಗವತ್ ಅವರು, '75 ವರ್ಷಕ್ಕೆ ಯಾರಾದರೂ ಕಡ್ಡಾಯವಾಗಿ ನಿವೃತ್ತಿಯಾಗಬೇಕು ಎಂದು ತಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಚುನಾವಣಾ ಆಯೋಗದ ತನಿಖೆ: ಒಂದು ಕುತೂಹಲಕರ ಘಟ್ಟ


ಇಂಡಿಯನ್‌ ಎಕ್ಸ್‌ಪ್ರೆಸ್‌ನ ಇತ್ತೀಚಿನ ತನಿಖೆಯ ಪ್ರಕಾರ, ಇಬ್ಬರು ಚುನಾವಣಾ ಆಯುಕ್ತರು ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರ ಆಕ್ಷೇಪಗಳು ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ, ಡೇಟಾಬೇಸ್ ಪ್ರವೇಶವನ್ನು ಕೇಂದ್ರೀಕರಿಸುವ ಕ್ರಮ ಮತ್ತು ಚುನಾವಣಾ ಸಾಫ್ಟ್‌ವೇರ್ ಕುರಿತ ಆತಂಕಗಳನ್ನು ಒಳಗೊಂಡಿದ್ದವು ಎಂದು ವರದಿ ಹೇಳಿದೆ.

ಆದರೆ ಈ ದಾಖಲೆಗಳನ್ನು ಎಕ್ಸ್‌ಪ್ರೆಸ್‌ಗೆ ಯಾರು ಒದಗಿಸಿದರು? ಅದರ ಹಿಂದೆ ಯಾವ ಮೂಲಗಳಿದ್ದವು? ವ ಅಧಿಕಾರ ವಲಯ ಈ ಮಾಹಿತಿಯನ್ನು ಮಾಧ್ಯಮಕ್ಕೆ ತಲುಪಿಸಿತು? ಎಂಬ ಪ್ರಶ್ನೆಗಳು ಸಹಜ.  
ಇಲ್ಲಿಯೇ ಗೊಯೆಂಕಾ–ಭಾಗವತ್ ಫೋಟೋ ಒಂದು ರಾಜಕೀಯ ಸುಳಿವಾಗಿ ಕೆಲಸ ಮಾಡುತ್ತಿದೆ.ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಆಯಾಮಗಳಲ್ಲಿ ಚರ್ಚೆಗೆ ಕೇಂದ್ರವಾಗಿದೆ.