KPSC ಮತ್ತು CJP ಈ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಕಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಏಕೆ ಜಿರಳೆ ಪಕ್ಷ ಮಾತಾಡುತ್ತಿಲ್ಲ ಎಂದು ಕೆಣಕಿದ್ದಾರೆ. ಬೇರೆ ರಾಜ್ಯಗಳಲ್ಲಿ ಬೇರೆ-ಬೇರೆ ವಿಚಾರಗಳಿಗೆ ಹೋರಾಟ ಮಾಡುತ್ತಿರುವ ಸಿಜೆಪಿ ಕಾರ್ಯಕರ್ತರು ಈ ವಿಚಾರದಲ್ಲೇಕೆ ಮೌನ ವಹಿಸಿದ್ದಾರೆ ಎಂದು ಕೇಳಿದ್ದಾರೆ. ರಾಜ್ಯ ವಿಧಾನಪರಿಷತ್ತಿಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ನಡೆಯಲಿರುವ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಯ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಕುಮಾರಸ್ವಾಮಿ ಮಾತನಾಡುತ್ತಾ ಈ ಪ್ರೆಶ್ನೆ ಹಾಕಿದ್ದಾರೆ.
KPSC ಅಕ್ರಮಗಳ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ ಎಸ್ ಐಟಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಆ ಅಧಿಕಾರಿಗಳನ್ನು ಬೇಡ ಅಂತ ಸರ್ಕಾರ ಹೇಳುತ್ತಿದೆ. ಇದರ ಅರ್ಥವೇನು.? ಅವರಲ್ಲಿ ಒಬ್ಬ ಅಧಿಕಾರಿಯನ್ನು ವರ್ಗಾವಣೆಯನ್ನು ಮಾಡಿದೆ. ಇವರಿಗೆ ಬೇಕಾಗಿರುವುದು ದಕ್ಷ ಅಧಿಕಾರಿಗಳಲ್ಲ ಬದಲಿಗೆ ಹೆಬ್ಬಟ್ಟು ಒತ್ತುವ ಅಧಿಕಾರಿಗಳು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. KPSCಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಕೈಚಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡಮಟ್ಟದ ಕೆಟ್ಟ ಹೆಸರು ಬರುತ್ತಿದೆ ವಾಗ್ದಾಳಿ ನಡೆಸಿದ ಸಚಿವರು ಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹೇಳುತ್ತಿದ್ದಾರೆ. ಇದು ನಿಜಕ್ಕೂ ಹಾಸ್ಯಾಸ್ಪದ ಎಂದರು.
ಇನ್ನು ರಾಜ್ಯದಲ್ಲಿ ಈ ಮಟ್ಟಿನ ಬರ ಇದ್ದರೂ ಅದರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಖಜಾನೆಯನ್ನು ಖಾಲಿ ಮಾಡಿಕೊಂಡು ಜನರಿಗೆ ಮಂಕು ಬೂದಿ ಹಚ್ಚುವ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.
-ರಾಜ್ಯದ ರೈತರು ಭಿಕ್ಷುಕರಾ.?-
ಇದೇ ವೇಳೆ ರಾಜ್ಯ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ 2500 ರೂಪಾಯಿ ಬರ ಪರಿಹಾರದ ಬಗ್ಗೆಯೂ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದರು. ಕಾಂಗ್ರೆಸ್ ನವರ ಯೋಗ್ಯತೆಯೇ ಇಷ್ಟು ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು 200 ಕೋಟಿ ಖರ್ಚು ಮಾಡುತ್ತಿದ್ದರು. ನಿಮ್ಮ ಯೋಗ್ಯತೆಗೆ ರೈತರಿಗೆ 2500 ಕೊಟ್ಟಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇದೆಯಾ? ರೈತ ಏನು ಭಿಕ್ಷುಕನಾ? ರೈತರನ್ನು ಈ ಮಟ್ಟಕ್ಕೆ ಇಳಿಸಿದ್ದೀರಲ್ಲಾ? ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೇ ಮುಖ್ಯಮಂತ್ರಿಗಳು ತಮ್ಮನ್ನು ತಾವು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರೈತನ ಮಗನಾದರೆ ಈ ರೀತಿ ಮಾಡುತ್ತಾರಾ? ಎಂದು ವಾಗ್ದಾಳಿ ನಡೆಸಿದರು.


