ಗಲ್ಲು ಶಿಕ್ಷೆಗೆ ಒಳಗಾದ ಅಬೂಟ್ಟಿ ವೆಲ್ಲಿಲಿ ಅವರದ್ದು ಬಡ ಕುಟುಂಬ. ಅವರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅಲ್ಲದೇ ನಾಲ್ವರು ಸಹೋದರಿಯರು ಇದ್ದಾರೆ. ಅಬೂಟ್ಟಿ ಅವರ ತಂದೆ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ದೊಡ್ಡ ಕುಟುಂಬವನ್ನು ನೋಡಿಕೊಳ್ಳುವ ಹೊಣೆ ಅಬೂಟ್ಟಿಯವರ ಮೇಲಿತ್ತು. ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡಲು ಅವರು ಸೌದಿ ಅರೇಬಿಯಾಗೆ ತೆರಳಿದ್ದರು. ಹೀಗಿರುವಾಗಲೇ 2023ರಲ್ಲಿ ಅದೊಂದು ದಿನ ಅಬೂಟ್ಟಿ ಚಾಲನೆ ಮಾಡುತ್ತಿದ್ದ ವಾಹನವನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು ಈ ವೇಳೆ ಸುಮಾರು 43 ಕೆಜಿಗಳಷ್ಟು ಮಾದಕದ್ರವ್ಯ ಪತ್ತೆಯಾಗಿತ್ತು. ಇದರಿಂದ ಅಬೂಟ್ಟಿ ಬಂಧನಕ್ಕೊಳಗಾಗಿದ್ದರು ಪ್ರಾಸಿಕ್ಯೂಷನ್ ವರದಿ ಪ್ರಕಾರ ಈ ನಿಷೇಧಿತ ಮಾದಕ ದ್ರವ್ಯವನ್ನು ಓಮನ್ ದೇಶದಿಂದ ರಸ್ತೆ ಮಾರ್ಗವಾಗಿ ಸೌದಿ ಅರೇಬಿಯಾಗೆ ತರಲಾಗಿತ್ತು. ಡ್ರಗ್ಸ್ ಸಾಗಾಟ, ಮಾರಾಟ ಹಾಗೂ ಸೇವನೆ ಸೌದಿ ಅರೇಬಿಯಾದ ಕಾನೂನಿನ ಪ್ರಕರಣ ಅಪರಾಧವಾಗಿದೆ. ಇದರಿಂದ ಅಬೊಟ್ಟಿಯವರಿಗೆ ಮರಣದಂಡನೆಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.
ಅಬೂಟ್ಟಿಗೆ ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ನೀಡಿದ ಮರಣದಂಡನೆ ತೀರ್ಪನ್ನು ಉನ್ನತ ಪ್ರಾಧಿಕಾರಗಳು ಎತ್ತಿ ಹಿಡಿದ ನಂತರ, ರಾಜಮನೆತನದ ಆಜ್ಞೆಯಂತೆ ಶಿಕ್ಷೆಯನ್ನು ಕಾರ್ಯಗತಗೊಳಿಸಲಾಗಿದೆ. ಆದರೆ ಈ ಶಿಕ್ಷೆಯ ಬಗ್ಗೆ ಅಬೂಟ್ಟಿ ಕುಟುಂಬ ಹಾಗೂ ಪರಿಚಯಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಬೂಟ್ಟಿ ವಿಸಿಟಿಂಗ್ ವೀಸಾದಲ್ಲಿ ಸೌದಿಗೆ ತೆರಳಿದ್ದರು. ಪೂರ್ಣ ಪ್ರಮಾಣದ ವೀಸಾ ಇಲ್ಲದೆ ಸೌದಿಯಲ್ಲಿ ಅಧಿಕೃತ ಚಾಲನಾ ಪರವಾನಗಿ ಪಡೆಯಲು ಸಾಧ್ಯವಿಲ್ಲ. ಹಾಗಿದ್ದರೆ ಅವರಿಗೆ ಡ್ರೈವಿಂಗ್ ಲೈಸೆನ್ಸ್ ಹೇಗೆ ಸಿಕ್ಕಿತು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕಣ್ಣೂರು ಮೂಲದ ಸ್ನೇಹಿತನೊಬ್ಬ ಈತನಿಗೆ ವೀಸಾ ಹೆಸರಿನಲ್ಲಿ ವಂಚಿಸಿದ್ದ ಎಂಬ ಆರೋಪವನ್ನು ಕುಟುಂಬದವರು ಮಾಡುತ್ತಿದ್ದಾರೆ.
ಅಲ್ಲದೆ, ಓಮನ್ ಮೂಲದ ಸ್ಪಾನ್ಸರ್ ಒಬ್ಬ ಅಬೂಟ್ಟಿಯನ್ನು ಪ್ರಕರಣದಲ್ಲಿ ಸಿಲುಕಿ ಹಾಕಿದ್ದ ಎನ್ನುವ ಆರೋಪಗಳಿವೆ. ಆದರೆ ಆರ್ಥಿಕ ಶಕ್ತಿ ಇಲ್ಲದೇ ಇದ್ದಿದ್ದರಿಂದ ಈ ಪ್ರಕರಣದಲ್ಲಿ ಆರೋಪಿಯ ಪರವಾಗಿ ಸೌದಿಯಲ್ಲಿ ಸರಿಯಾದ ಕಾನೂನು ಹೋರಾಟ ನಡೆಸಲು ಕುಟುಂಬಸ್ಥರಿಗೆ ಸಾಧ್ಯವಾಗಿಲ್ಲ. ಇದರಿಂದ ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಅಬೂಟ್ಟಿ ಮರಣದಂಡನೆಗೆ ಗುರಿಯಾಗಬೇಕಾಗಿ ಬಂದಿದೆ. ಇದೀಗ ಎಲ್ಲವೂ ಮುಗಿದಿದ್ದು ಅಬೂಟ್ಟಿ ಗಲ್ಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಅವರ ಅಂತ್ಯಕ್ರಿಯೆಯನ್ನಾದರೂ ಮಾಡೋಣ ಎಂದರೆ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಸಿಗಬಹುದಾ ಎಂದು ಎದುರು ನೋಡುತ್ತಿದ್ದಾರೆ.




