ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರೇ ಆಗಲಿ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಸಮಾನ ಅವಕಾಶವಿದೆ. ಅದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಯದುವೀರ್ ಹೇಳಿದ್ದಾರೆ. ಇದೇ ವೇಳೆ ಮಹಿಷಾ ದಸರಾವನ್ನು ಆಚರಿಸುವವರು ಯಾರಿಗೂ ಯಾವುದೇ ಹಾನಿ ಅಥವಾ ತೊಂದರೆಯಾಗದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂದರು
ಇನ್ನು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಬೇಕು ಎಂಬ ವಿಚಾರಕ್ಕೂ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ. ಅದು ತಾಯಿ ಚಾಮುಂಡೇಶ್ವರಿ ನೆಲೆಸಿರುವ ಕ್ಷೇತ್ರ ಅಲ್ಲಿ ಏಕೆ ಪುಷ್ಪಾರ್ಚನೆ ಎಂದು ಪ್ರಶ್ನಿಸಿದರು. ಅದೇ ರೀತಿ ಮಹಿಷಾ ದಸರಾ ಆಚರಣೆ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ಆದರೆ ಧರ್ಮದಲ್ಲಿರುವ ಪದ್ಧತಿ ಹಾಗೂ ನಂಬಿಕೆಗೆ ಯಾವುದೇ ಧಕ್ಕೆ ಬರಬಾರದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವು ಜವಬ್ದಾರಿಯುತವಾಗಿ ಚಾಮುಂಡಿ ಬೆಟ್ಟದಲ್ಲಿ ಏನೆಲ್ಲಾ ಪರಂಪರೆ ಮತ್ತು ನಂಬಿಕೆ ಇದೆ ಎಂಬುದನ್ನು ಅಧಿಕಾರಿಗಳಿಗೆ ವ್ಯಕ್ತ ಪಡಿಸಿದ್ದೇವೆ ಎಂದು ಯದುವೀರ್ ಸ್ಪಷ್ಚಪಡಿಸಿದ್ದಾರೆ.



