ಕೇಂದ್ರದಿಂದ ಆಗಮಿಸುವ ಮೂರು ತಂಡಗಳಲ್ಲಿ ಒಂದೊಂದು ತಂಡ ಒಂದೊಂದು ಕಡೆಗಳಲ್ಲಿ ಅಧ್ಯಯನ ನಡೆಸಲಿವೆ. ಒಂದು ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗಗಳಲ್ಲಿ, ಮತ್ತೊಂದು ತಂಡ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಗೂ ಮತ್ತೊಂದು ತಂಡ ಮೈಸೂರು ಭಾಗದ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಪರಮೇಶ್ವರ್ ವಿವರಿಸಿದರು. ಇನ್ನು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಬರ ಪರಿಸ್ಥಿತಿಗೆ ಸಂಬಂಧಿಸಿದ ಮನವಿ ಸಲ್ಲಿಸಿದ್ದು ಅದರ ಆಧಾರದ ಮೇಲೆ ಕೇಂದ್ರದ ತಂಡಗಳು ಪರಿಶೀಲನೆ ಕೈಗೊಳ್ಳಲಿವೆ. ಇದೇ ವೇಳೆ ರಾಜ್ಯ ಸರ್ಕಾರದಿಂದ ಮತ್ತೊಂದು ಮನವಿಯನ್ನೂ ಸಲ್ಲಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಮಾಹಿತಿಯನ್ನು ತಂಡಗಳು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಕೆಲವು ತಾಲೂಕುಗಳಿಗೆ ತಂಡಗಳು ನೇರವಾಗಿ ಭೇಟಿ ನೀಡಿ, ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿವೆ. ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಸ್ಥಳ ಪರಿಶೀಲನೆಯ ವೇಳೆ ಕಂಡುಬರುವ ವಾಸ್ತವ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಪರಮೇಶ್ವರ್ ಅವರು ವಿವರಿಸಿದರು
ಇದೇ ವೇಳೆ ನಿಗದಿತ ಮಾನದಂಡಗಳ ಆಧಾರದಲ್ಲೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದ ಪರಮೇಶ್ವರ್ ಮಾರ್ಗಸೂಚಿಗಳ ವ್ಯಾಪ್ತಿಗೆ ಬಾರದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ ಎಂದರು. ಇದರಿಂದ ರಾಜ್ಯ ಸರ್ಕಾರದ ವರದಿ ಮತ್ತು ಕೇಂದ್ರದ ತಂಡಗಳ ಪರಿಶೀಲನಾ ವರದಿ ನಡುವೆ ದೊಡ್ಡ ವ್ಯತ್ಯಾಸ ಕಂಡುಬರುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯ ಪಟ್ಟರು. ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯಗೊಳ್ಳಲಿದೆ. ಬಳಿಕ ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಅಂತಿಮ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಉಂಟಾಗಿರುವ ನಷ್ಟ, ರೈತರ ಪರಿಸ್ಥಿತಿ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಕೇಂದ್ರದ ಮುಂದೆ ಮಂಡಿಸಲಾಗುವುದು ಎಂದು ಅವರು ತಿಳಿಸಿದರು.


