2028ರ ಸಿಂಹಸ್ಥ ಕುಂಭಮೇಳದ ಸಿದ್ಧತೆಗಾಗಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಕೆಲವರು ಕಲ್ಲು ತೂರಾಟ ನಡೆಸಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಹಿ ಮಸೀದಿ ಸುತ್ತಮುತ್ತ ತ್ವರಿತ ಕಾರ್ಯಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಿಂಹಸ್ಥ ಕುಂಭಮೇಳದ ಹಿನ್ನೆಲೆಯಲ್ಲಿ ಉಜ್ಜಯಿನಿ ನಗರದಲ್ಲಿ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಭಾಗವಾಗಿ ಶಾಹಿ ಮಸೀದಿಯ ನಿರ್ದಿಷ್ಟ ಭಾಗವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದಾಗ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಪ್ರಕಾರ, ಮಸೀದಿ ಸಮಿತಿಯ ಸದಸ್ಯರು ತೆರವು ಕಾರ್ಯಾಚರಣೆಗೆ ಸಹಕರಿಸುತ್ತಿದ್ದರು. ಭದ್ರತಾ ಕಾರಣಗಳಿಂದ ಪ್ರದೇಶದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಘು ಬಲಪ್ರಯೋಗ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ, ಡ್ರೋನ್ ಮೂಲಕ ನಿಗಾ

ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಅವರ ಪ್ರಕಾರ, ಕಲ್ಲು ತೂರಾಟ ನಡೆಸಿದವರನ್ನು ಸಿಸಿಟಿವಿ ಮತ್ತು ಡ್ರೋನ್ ದೃಶ್ಯಗಳ ಆಧಾರದ ಮೇಲೆ ಗುರುತಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೆಲ ಮಹಿಳೆಯರು ರಸ್ತೆ ತಡೆಗೆ ಮುಂದಾಗಿದ್ದರೂ, ಪೊಲೀಸರು ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ. ಇದರಿಂದ ರಸ್ತೆ ಸಂಚಾರವೂ ಪುನರಾರಂಭಗೊಂಡಿದೆ. ಮುಸ್ಲಿಂ ಸಮುದಾಯದ ಮುಖಂಡರು ಕೂಡ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಸೀದಿ ತೆರವು ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದನ ವಿರೋಧ

ಶಾಹಿ ಮಸೀದಿಯ ಭಾಗ ತೆರವು ಕಾರ್ಯಾಚರಣೆಯನ್ನು ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗಢಿ ವಿರೋಧಿಸಿದ್ದಾರೆ. ಧಾರ್ಮಿಕ ಭಾವನೆಗಳನ್ನು ಗೌರವಿಸುವಂತೆ ಮಧ್ಯಪ್ರದೇಶ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಶತಮಾನಗಳಷ್ಟು ಹಳೆಯದಾದ ಪಾರಂಪರಿಕ ತಾಣವನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ಆಡಳಿತದ ಕ್ರಮದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದು, ರಸ್ತೆ ಅಗಲೀಕರಣಕ್ಕೆ ಪರ್ಯಾಯ ಜಾಗವನ್ನು ಬಳಸಬಹುದಿತ್ತು ಎಂದು ಹೇಳಿದ್ದಾರೆ.

2028ರ ಸಿಂಹಸ್ಥ ಕುಂಭಮೇಳದ ಪೂರ್ವಭಾವಿ ಸಿದ್ಧತೆಗಳ ಭಾಗವಾಗಿ ಉಜ್ಜಯಿನಿ ನಗರದಲ್ಲಿ ಒಟ್ಟು 272 ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಅಭಿವೃದ್ಧಿ ಯೋಜನೆಗೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕುಟುಂಬದ ಆಸ್ತಿಯೂ ಒಳಪಟ್ಟಿದ್ದು, ತಮ್ಮ ಪೂರ್ವಜರ ಮನೆಯ ಒಂದು ಭಾಗವನ್ನು ಯೋಜನೆಗಾಗಿ ಬಿಟ್ಟುಕೊಟ್ಟಿರುವುದಾಗಿ ಅವರು ಈ ಹಿಂದೆ ಹೇಳಿದ್ದರು. ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವೈಯಕ್ತಿಕವಾಗಿ ಭಾವನಾತ್ಮಕವಾಗಿದ್ದರೂ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದರು.

ಪ್ರಸ್ತುತ ಶಾಹಿ ಮಸೀದಿ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಪೊಲೀಸರು ನಿಗಾದಲ್ಲಿಟ್ಟಿದ್ದಾರೆ.